ಮಧುಗಿರಿ - 
	ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ. ಶಿರಾ, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳನ್ನೊಳಗೊಂಡ ಜಿಲ್ಲಾ ಉಪವಿಭಾಗ ಕೇಂದ್ರ. ಈ ತಾಲ್ಲೂಕಿನ ದಕ್ಷಿಣಕ್ಕೆ ಕೊರಟಗೆರೆ, ಪಶ್ಚಿಮಕ್ಕೆ ಶಿರಾ ತಾಲ್ಲೂಕುಗಳಿದ್ದು ಪೂರ್ವ, ಉತ್ತರ ಮತ್ತು ವಾಯವ್ಯದ ಮೂರು ಕಡೆಯೂ ಆಂಧ್ರಪ್ರದೇಶ ಸುತ್ತುವರಿದಿದೆ. ದೊಡ್ಡೇರಿ, ಮಧುಗಿರಿ, ಮಿಡಿಗೇಶಿ, ಇಟ್ಟಿಗದಿಬ್ಬನ ಹಳ್ಳಿ. ಕೊಡಿಗೇನಹಳ್ಳಿ ಮತ್ತು ಪುರವಾರ ಹೋಬಳಿಗಳು. ಒಂದು ಪಟ್ಟಣವಿದ್ದು 320 ಗ್ರಾಮಗಳಿವೆ. ವಿಸ್ತೀರ್ಣ 11.184.4 ಚಕಿಮೀ. ಜನಸಂಖ್ಯೆ 2,64,447 (2001).

	ಜಿಲ್ಲೆಯ ಪೂರ್ವಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಕಣಶಿಲೆಯ ಬೆಟ್ಟಗಳು ಹಬ್ಬಿವೆ. ಈ ತಾಲ್ಲೂಕಿನಲ್ಲಿರುವ ಎತ್ತರದ ಬೆಟ್ಟಗಳೆಂದರೆ ಬ್ಯಾಲ್ಯ (888 ಮೀ.) ದೊಡ್ಡನರಮಂಗಲ (945 ಮೀ). ಮಿಡಿಗೇಶಿದುರ್ಗ (1,039 ಮೀ) ಮತ್ತು ಮಧುಗಿರಿದುರ್ಗ (1.192 ಮೀ). ತಾಲ್ಲೂಕಿನ ಪೂರ್ವಭಾಗದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಜಯಮಂಗಲಿ ನದಿ ಹರಿಯುತ್ತದೆ. ಹೊಳವನಹಳ್ಳಿಯ ಹತ್ತಿರ ಪೂರ್ವದಿಂದ ಗರುಡಾಚಲ ನದಿಯೂ ರಾಮಪುರದ ಬಳಿ ಪಶ್ಚಿಮದ ಕಡೆಯಿಂದ ಸುವರ್ಣಮುಖಿ ನದಿಯೂ ಇದಕ್ಕೆ ಸೇರುತ್ತದೆ. ಮುಂದೆ ಇದು ತಾಲ್ಲೂಕಿನ ಈಶಾನ್ಯದಿಕ್ಕಿನಲ್ಲಿ ಹರಿದು ಆಂಧ್ರ ಪ್ರದೇಶದ ಅನಂತರಪುರ ಜಿಲ್ಲೆಯನ್ನು ಪ್ರವೇಶಿಸುವುದು. ಕುಮುದ್ವತಿ ನದಿ ಈ ತಾಲ್ಲೂಕಿನ ಅತ್ಯಂತ ಈಶಾನ್ಯದಲ್ಲಿ ದಕ್ಷಿಣೋತ್ತರವಾಗಿ ಹರಿಯುವುದು. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ ಸುಮಾರು 635ಮಿಮೀ.

	ಇಲ್ಲಿಯ ಕೆಲವು ಭಾಗಗಳಲ್ಲಿ ಕುರಂದ ಶಿಲೆಗಳಿರುವುದು ಕಂಡುಬಂದಿದೆ. ರಾಗಿ, ಬತ್ತ, ಜೋಳ, ಸೇಂಗಾ, ಹಾರಕ, ನವಣೆ, ಹುರಳಿ, ಕಬ್ಬು ಮುಂತಾದವು ಮುಖ್ಯ ಬೆಳೆಗಳು ತೆಂಗಿನ ಬೆಳೆಯೂ ಸ್ವಲ್ಪ ಉಂಟು ದಾಳಿಂಬೆ ಹಣ್ಣಿಗೆ ಪ್ರಸಿದ್ಧ.

	ಬೀಡಿ, ಕೈಮಗ್ಗದ ಹತ್ತಿ ಉಣ್ಣೆಬಟ್ಟೆ ತಯಾರಿಕೆ ಮತ್ತು ಕೆಲವು ಖಾದಿ ಗ್ರಾಮೋದ್ಯೋಗಗಳಿವೆ. 1960ರಲ್ಲಿ ಪ್ರಾರಂಭಿಸಿದ ನಿಯಂತ್ರಿತ ಮಾರುಕಟ್ಟೆ ಮತ್ತು ಕೆಲವು ವಾಣಿಜ್ಯ ಬ್ಯಾಂಕುಗಳಿವೆ, ತುಮಕೂರು ಪಾವಗಡ ರಸ್ತೆ ಈ ತಾಲ್ಲೂಕಿನ ಮೇಲೆ ಹಾದು ಹೋಗುತ್ತದೆ. ಇದರ ಸುತ್ತಲ ಸ್ಥಳಗಳಿಗೆ ಉತ್ತಮ ಮಾರ್ಗಗಳಿವೆ. ಅಂಚೆ, ತಂತಿ, ವಿದ್ಯುತ್ ಸೌಲಭ್ಯವಿದ್ದು ಶಾಲೆಗಳೂ ಆರೋಗ್ಯಕೇಂದ್ರಗಳೂ ಇವೆ.

	ಈ ತಾಲ್ಲೂಕಿನಲ್ಲಿ ಹಲವು ಸ್ಥಳೀಯ ಪ್ರಸಿದ್ಧ ಸ್ಥಳಗಳಿವೆ. ತುಮಕೂರು ನಗರದ ಉತ್ತರಕ್ಕೆ 42ಕಿಮೀ ದೂರದಲ್ಲಿರುವ ಭಸ್ಮಾಂಗಿ ಎಂಬುದು ಕೋಟೆಯುಳ್ಳ ಒಂದು ಬೆಟ್ಟ. ಹೈದರ್‍ಅಲಿ ಈ ಪ್ರದೇಶವನ್ನು ವಶಪಡಿಸಿಕೊಂಡಾಗ (1768) ಬೂದಿ ಬಸವಪ್ಪನಾಯಕ ಕಟ್ಟಿಸಿದ್ದ ಮಣ್ಣಿನ ಕೋಟೆಯನ್ನು ಕೆಡವಿ ಇಟ್ಟಿಗೆ ಮತ್ತು ಕಲ್ಲಿನಿಂದ ಕೋಟೆಯನ್ನೂ ಅರಮನೆಯನ್ನೂ ಕಟ್ಟಿಸಿದ. ಬಿಜವರ ತೋಟದ ಸಿದ್ಧಲಿಂಗಭೂಪಾಲ ಮತ್ತು ಮುಮ್ಮಡಿ ಚಿಕ್ಕಭೂಪಾಲ ಈ ಪ್ರಸಿದ್ಧ ದೊರೆಗಳ ಕೇಂದ್ರವಾಗಿತ್ತು. ಮುಮ್ಮಡಿ ಚಿಕ್ಕಭೂಪಲ ಕನ್ನಡ ಮತ್ತು ಸಂಸ್ಕøತಕ್ಕೆ ಪ್ರೋತ್ಸಾಹ ನೀಡಿದುದಲ್ಲದೆ ತಾನೇ ಅಭಿನವ ಭಾರತ ಸೌರಸಂಗ್ರಹವೆಂಬ ಸಂಸ್ಕøತ ಗ್ರಂಥದ ಕರ್ತೃವೂ ಆಗಿದ್ದ. ಚಿಕ್ಕದೇವರಾಜ 17ನೆಯ ಶತಮಾನದ ಅಂತ್ಯದಲ್ಲಿ ಇದನ್ನು ಗೆದ್ದ. ಮಧುಗಿರಿಗೆ 21ಕಿಮೀ ದೂರದಲ್ಲಿರುವ ಏಳುಸುತ್ತಿನ ಕೋಟೆ ಎಂಬಲ್ಲಿ ಹಿಂದೆ ಪಾಂಡವರು ಇದ್ದರೆಂದು ಪ್ರತೀತಿ. ಮಿಡಿಗೇಶಿ ಹೋಬಳಿ ಕೇಂದ್ರ. ಹಿಂದೆ ಇದು ಪಾಳೆಯಪಟ್ಟಿನ ಕೇಂದ್ರವಾಗಿತ್ತು. ಮಧುಗಿರಿಯ ವಾಯವ್ಯದಲ್ಲಿರುವ ಸಿದ್ಧಾಪುರದಲ್ಲಿ ಒಂದು ಹಳೆ ಕೋಟೆ ಇದೆ. ಇಲ್ಲಿಯ ಶಾಸನದ ಪ್ರಕಾರ ಬಿಜವರದ ಮಹಾನಾಡುಪ್ರಭು ಚಿಕ್ಕಪ್ಪಗೌಡ 1593ರಲ್ಲಿ ಈ ಊರನ್ನು ಕಟ್ಟಿದನೆಂದು ತಿಳಿದುಬರುತ್ತದೆ. ಅಲ್ಲದೆ ದೊಡ್ಡದಾಳಿವಟ್ಟದಲ್ಲಿರುವ ದೊಡ್ಡಲಕ್ಷ್ಮಿನರಸಿಂಹ ದೇವಾಲಯ ಪ್ರಸಿದ್ಧ. ಮಧುಗಿರಿಯ ಉತ್ತರಕ್ಕೆ 21ಕಿಮೀ ದೂರದಲ್ಲಿ ಜಯಮಂಗಲಿ ನದಿ ದಡದಲ್ಲಿರುವ ಕೊಡಿಗೇನಹಳ್ಳಿ ಹೋಬಳಿಯ ಕೇಂದ್ರ. ಕುಟುವತ್ತಿ ಬೆಟ್ಟದ ಬುಡದಲ್ಲಿರುವ ಕುಡುವತ್ತಿ ಈಗ ಜನವಸತಿ ಇಲ್ಲದ ಗ್ರಾಮ. ಇಲ್ಲಿ ಕಂಬದರಾಯ ದೇವಾಲಯ, ಜಿರಲೆ ಮಲ್ಲಮ್ಮ ಎಂಬಾಕೆ ಕಟ್ಟಿಸಿದಳೆಂದು ಹೇಳುವ ಗೋಪಾಲಕೃಷ್ಣ ಮತ್ತು ಲಕ್ಷ್ಮೀದೇವಿ ದೇವಾಲಯಗಳು ಮತ್ತು ಮಜ್ಜನದ ಬಾವಿಯೆಂಬ ಕೊಳ ಇವೆ. ದೊಡ್ಡದಾಳಿವಟ್ಟ ಮತ್ತು ಗರಣಿಯ ಲಕ್ಷ್ಮಿನರಸಿಂಹಸ್ವಾಮಿ ಜಾತ್ರೆಗಳು, ಗೊಂಡಿಹಳ್ಳಿಯ ಆಂಜನೇಯಸ್ವಾಮಿ ಜಾತ್ರೆ ಈ ತಾಲ್ಲೂಕಿನಲ್ಲಿ ನಡೆಯುವ ಮುಖ್ಯ ಜಾತ್ರೆಗಳು.

	ಮಧುಗಿರಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ. ತುಮಕೂರು-ಪಾವಗಡ ಮಾರ್ಗಮಧ್ಯದಲ್ಲಿ. ಮಧುಗಿರಿ ಬೆಟ್ಟದ ಉತ್ತರಭಾಗದಲ್ಲಿ ಹಾಗೂ ತುಮಕೂರಿಗೆ ಉತ್ತರದಲ್ಲಿ ಸುಮಾರು 42 ಕಿಮೀ ದೂರದಲ್ಲಿದೆ. ಊರನ್ನು ಸುತ್ತಲೂ ಬೆಟ್ಟಗಳು ಆವರಿಸಿವೆ. ಜನಸಂಖ್ಯೆ 26,351 (2001).

	ಈ ಪಟ್ಟಣ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು ಹಾಗೂ ಕಂಬಳಿ ತಯಾರಿಕೆಗೆ ಪ್ರಸಿದ್ಧ. ಈ ಉತ್ಪನ್ನಗಳನ್ನು ಸುತ್ತಲ ಊರುಗಳಿಗೂ ತುಮಕೂರು, ತಿಪಟೂರು, ಬೆಂಗಳೂರು, ಬಳ್ಳಾರಿ ಮತ್ತು ಆಂಧ್ರಪ್ರದೇಶದ ಹಿಂದೂಪುರಗಳಿಗೂ ಕಳುಹಿಸುವುದುಂಟು. ಚಿನ್ನದಸಲಕಿ ಎಂಬ ಅಕ್ಕಿ ಇಲ್ಲಿ ಮತ್ತು ಸುತ್ತಲ ಊರಿನಲ್ಲಿ ಪ್ರಸಿದ್ಧ.

	ಮಧುಗಿರಿಯಲ್ಲಿ ತಾಲ್ಲೂಕು ಮಟ್ಟದ ಕೆಲವು ಸರ್ಕಾರಿ ಕಚೇರಿಗಳು. ಪಶುವೈದ್ಯಾಲಯ, ಆರೋಗ್ಯಕೇಂದ್ರ, ಅಂಚೆ, ತಂತಿ, ವಿದ್ಯುತ್, ದೂರವಾಣಿ, ವಾಣಿಜ್ಯ ಬ್ಯಾಂಕ್ ಮತ್ತು ಶಾಲೆ ಇವೆ. ಸುತ್ತಲ ಊರುಗಳಿಗೆ ಮಾರ್ಗಗಳಿದ್ದು ವ್ಯಾಪಾರ ಕೇಂದ್ರವಾಗಿದೆ. ರಕ್ಷಿತ ಕುಡಿಯುವ ನೀರಿನ ಸರಬರಾಜು ಇದ್ದು ಪಟ್ಟಣ ಪುರಸಭಾಡಳಿತಕ್ಕೆ ಒಳಪಟ್ಟಿದೆ.
(ಪಿ.ಬಿ.)

	ಮಧುಗಿರಿಯ ಮೊದಲ ಹೆಸರು ಮದ್ದಗಿರಿ. ಮಧು ಎಂಬ ಹೆಸರಿನ ಗಿರಿಯ ಉತ್ತರದ ಬುಡದಲ್ಲಿ ಈ ಊರು ಇದ್ದುದರಿಂದ ಮದ್ದಗಿರಿ. ಮಧು ಎಂಬ ಹೆಸರಿನ ಗಿರಿಯ ಉತ್ತರದ ಬುಡದಲ್ಲಿ ಈ ಊರು ಇದ್ದುದರಿಂದ ಮದ್ದಗಿರಿ ಎಂಬ ಹೆಸರು ಇತ್ತಂತೆ. 1927ರಿಂದ ಮಧುಗಿರಿ ಎಂಬ ಹೆಸರು ರೂಢಿಗೆ ಬಂದಿತು. ಮಧುಗಿರಿ ಕೋಟೆಯನ್ನು ಹಿರೇಗೌಡನೆಂಬವನು ಕಟ್ಟಿಸಿದ. ಈತನ ವಂಶಜರು ಇಲ್ಲಿ ಒಂದು ಪಾಳೆಯಪಟ್ಟನ್ನು ಸ್ಥಾಪಿಸಿದ್ದರು. 1678ರಲ್ಲಿ ಇವರು ಮೈಸೂರಿನ ಚಿಕ್ಕದೇವ ರಾಜನಿಗೆ ಸೋತಕಾರಣ ಮಧುಗಿರಿ ಇವರ ಕೈ ಬಿಟ್ಟಿತು. ಅನಂತರ ಚಿಕ್ಕದೇವರಾಜ ಈ ಗೌಡರುಗಳನ್ನು ಬಂಧನದಿಂದ ಮುಕ್ತರಾಗಿಸಿ ಅವರ ಜೀವನೋಪಾಯಕ್ಕಾಗಿ ಮಿಡಿಗೇಶಿ ಎಂಬ ಊರನ್ನು ಸ್ಥಿರಾಸ್ತಿಯಾಗಿ ಕೊಟ್ಟ. ಮಧುಗಿರಿ ಕೋಟೆ ಕೆಲಕಾಲ ಹೈದರನ ವಶದಲ್ಲಿತ್ತು. ಅವನು ಅನೇಕ ಹೊಸ ನಿರ್ಮಾಣಗಳಿಂದ ಕೋಟೆಯನ್ನು ಭದ್ರಪಡಿಸಿದ. 1767ರಲ್ಲಿ ಮರಾಠಾ ಮಾಧವರಾವ್ ಈ ಊರನ್ನು ವಶಪಡಿಸಿ ಕೊಂಡ. ಮಧುಗಿರಿ ಏಳು ವರ್ಷಗಳ ಕಾಲ ಅವನ ಆಳ್ವಿಕೆಗೆ ಸೇರಿತ್ತು. ಟಿಪ್ಪು 1774ರಲ್ಲಿ ಮಧುಗಿರಿಯನ್ನು ವಶಪಡಿಸಿಕೊಂಡ. ಆಗ ಮರಾಠರು ಸಿಕ್ಕಿದ್ದನು ಕೊಳ್ಳೆಹೊಡೆದು ಮಧುಗಿರಿಯನ್ನು ಹಾಳುಗೆಡವಿಹೋದರು. ಪುನಃ 1791ರಲ್ಲಿ ಮರಾಠರು ಪರಶುರಾಮ ಭಾವುವಿನ ಸೇನಾಪತಿಯಾಗಿದ್ದ ಬಲವಂತರಾವ್ ಎಂಬವನ ನೇತೃತ್ವದಲ್ಲಿ ಮಧುಗಿರಿ ಕೋಟೆಗೆ ಐದು ತಿಂಗಳ ಕಾಲ ಮುತ್ತಿಗೆ ಹಾಕಿ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಲೂಟಿ ಮಾಡಿದರು. 1792ರಲ್ಲಿ ಟಿಪ್ಪುವಿಗೂ ಇಂಗ್ಲಿಷರಿಗೂ ಸಂಧಿಯಾಗಿ ಸುಲ್ತಾನನ ಸೈನ್ಯ ಇಲ್ಲಿಗೆ ಬಂದು ಮೇಲೆ, ಬಲವಂತರಾವ್ ಹಿಂತಿರುಗಿದ. ಮಧುಗಿರಿಯನ್ನು ವಶಪಡಿಸಿಕೊಂಡ ಟಿಪ್ಪು ಅದಕ್ಕೆ ಫತೇಬಾದ್ ಎಂದು ಹೆಸರಿಟ್ಟಿದ್ದ. ನಾಲ್ಕನೆಯ ಮೈಸೂರು ಯುದ್ಧವಾದ ಮೇಲೆ ಮಧುಗಿರಿ ಮೈಸೂರಿಗೆ ಸೇರಿತು.

	ಮಧುಗಿರಿಯ ಪ್ರಸಿದ್ಧ ಕೋಟೆಯ ಅವಶೇಷವನ್ನು ಈಗಲೂ ನೋಡಬಹುದು. ಮಧುಗಿರಿದುರ್ಗದ ಕೋಟೆಗೆ ಅಂತರಾಳದ ಬಾಗಿಲು, ದಿಡ್ಡಿಬಾಗಿಲು, ಮೈಸೂರು ಬಾಗಿಲು ಮುಂತಾದ ಬಾಗಿಲುಗಳಿವೆ. ಕೋಟೆಯಲ್ಲಿ ಉತ್ತಮ ನೀರಿನ ಸೌಕರ್ಯವಿತ್ತು. ಈಗಲೂ ಜಾನಯ್ಯನ ಬಾವಿ, ಅರಸನ ಬಾವಿ, ಪ್ರಧಾನ ಬಾವಿ, ದೇವರಾಯ ಸಮುದ್ರ (ರಚನೆ 1699) ಮೊದಲಾದ ಅನೇಕ ಕೊಳಗಳಿವೆ. ಈ ಬಾವಿಗಳೆಲ್ಲಶಿಲ್ಪ ಕಲಾಕೃತಿಗಳನ್ನೊಳಗೊಂಡಿದೆ. ನವಲಡಿ ಬುಗ್ಗೆ, ಭೀಮನ ಬುಗ್ಗೆ, ಚಂದ್ರಬುಗ್ಗೆ, ನವಿಲು ಬುಗ್ಗೆ ಇತ್ಯಾದಿ ಅನೇಕ ನೀರಿನ ಬುಗ್ಗೆಗಳು (ತಲಪರಿಗೆ) ಇಲ್ಲಿ ಇವೆ. ಚಂದ್ರ ಬುಗ್ಗೆಯ ಹತ್ತಿರ ರಾಮಪ್ಪಗೌಡ ಮತ್ತು ತಿಮ್ಮಪ್ಪಗೌಡರ ಅರಮನೆ ಇತ್ತಂತೆ. ಕೋಟೆಯ ಸಮೇಲೆ ಗೋಪಾಲಕೃಷ್ಣನ ದೇವಸ್ಥಾನವಿದೆ. ಕೋಟೆಯೊಳಗಡೆ ದವಸಧಾನ್ಯಗಳನ್ನು ತುಂಬಿಡಲು ಅನೇಕ ಕಣಜಗಳಿವೆ. ಭೀಮನ ಬುಗ್ಗೆಯ ಹತ್ತಿರ ಮಧುಗಿರಿ ನಾಯಕನಾದ ಮುಮ್ಮಡಿ ಚಿಕ್ಕಪ್ಪಗೌಡ ಕಟ್ಟಿಸಿದ ಆಂಜನೇಯನ ಗುಡಿಯಿದೆ. ಶ್ರವಣಗುಡಿಯಲ್ಲಿ ಹುತಾತ್ಮರ ಸ್ಮಾರಕಗಳಿವೆ. ಮಧುಗಿರಿದುರ್ಗದ ಬುಡದಲ್ಲಿರುವ ಲಿಂಗಾಯಿತ ಮಠದ ಆಗ್ನೇಯಕ್ಕೆ ಸಾಧುಗವಿ, ಮೇಕೆಗವಿ, ಪಟ್ಟದಮ್ಮನಗವಿ, ಸಿದ್ಧೇಶ್ವರ ಗವಿ ಮುಂತಾದ ಗವಿಗಳು ಇವೆ.
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ